Friday, July 3, 2009

ಪತ್ರಿಕಾಗೋಷ್ಠಿ ನಡೆಸೋದು ಹೇಗೆ ???


-ನಮ್ಮ ಸಮಸ್ಯೆಯೊಂದಿದೆ, ಅದನ್ನ ಹೇಳೋಕೆ ಪ್ರೆಸ್‌ಮೀಟ್ ಕರೆಯಬೇಕು...ಎಲ್ಲಿ ಮಾಡೋದು?
-ನಾವು ಹೊಸ product ತಂದಿದ್ದೇವೆ...ಅದರ ಬಗ್ಗೆ ಹೇಳಲು ಸುದ್ದಿಗೋಷ್ಠಿ ಮಾಡ್ಬೇಕು, ಹೇಗೆ ಮಾಡೋದು?
-ಪ್ರೆಸ್ ಮೀಟ್ ಮಾಡಬೇಕು ಎಂದಿದೆ, ಆದ್ರೆ ಎಷ್ಟು ಖರ್ಚಾಗುತ್ತೋ ಗೊತ್ತಿಲ್ಲ....

ಅನೇಕ ಮಂದಿಯನ್ನು ಕಾಡುವ ಪ್ರಶ್ನೆಗಳಿವು...

ಮಂಗಳೂರಿನಲ್ಲಿ ಸರಾಸರಿ ವಾರವೊಂದಕ್ಕೆ ೩೫-೪೦ ಪತ್ರಿಕಾಗೋಷ್ಠಿಗಳು ನಡೆಯುತ್ತವೆ...ಆದರೆ ಶೇ.೩೦ರಿಂದ ೪೦ರಷ್ಟು ಪಾರ್ಟಿಗಳಿಗೆ ಹೇಗೆ ಪತ್ರಿಕಾಗೋಷ್ಟಿ ನಡೆಸಬೇಕೆಂದು ಗೊತ್ತಿರುವುದಿಲ್ಲ. ಅಂತವರಿಗೆ ಈ ಚಿಕ್ಕ ಲೇಖನ ನೆರವಾದೀತು ಎಂಬ ಉದ್ದೇಶ ನಮ್ಮದು...

  • ಪತ್ರಿಕಾಗೋಷ್ಠಿ ನಡೆಸಲು ನಿರ್ದಿಷ್ಟ ಕಾರಣವಿರಲಿ. ಇಲ್ಲವಾದರೆ ನಿಮ್ಮ ಸಮಯ, ಪತ್ರಕರ್ತರ ಸಮಯ ಎರಡೂ ವ್ಯರ್ಥ. ವಿಷಯವಿಲ್ಲದೇ ಕೇವಲ ಪ್ರಚಾರಕ್ಕೋಸ್ಕರ ಪತ್ರಿಕಾಗೋಷ್ಠಿಯಿಂದ ಲಾಭಕ್ಕಿಂತ ನಷ್ಟ ಹೆಚ್ಚು.

  • ಪ್ರಮುಖ ಸಮಸ್ಯೆಗಳು ಕಾಡುತ್ತಿದ್ದು ಅದನ್ನು ಬೆಳಕಿಗೆ ತರುವುದಾದರೆ ಪತ್ರಿಕಾಗೋಷ್ಠಿ ನಡೆಸಬಹುದು. ಆದರೆ ಪತ್ರಿಕಾಗೋಷ್ಠಿ ನಡೆಸುವಾಗ ಆದಷ್ಟು ಕೂಲಂಕಷ ಮಾಹಿತಿ ನಿಮ್ಮಲ್ಲಿ ಇರಬೇಕು, ಯಾಕೆಂದರೆ ಪತ್ರಕರ್ತರಿಂದ ಪ್ರಶ್ನೆಗಳು ಬಂದೇ ಬರುತ್ತವೆ. ಅವುಗಳಿಗೆ ಸಮರ್ಪಕ ಉತ್ತರ ನೀಡಿ.

  • ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಪತ್ರಿಕಾಗೋಷ್ಠಿ ಕರೆಯಬಹುದು. ಅಂತಹ ಸಂದರ್ಭದಲ್ಲಿ ಉತ್ಪನ್ನದ ಬಗ್ಗೆ ಪೂರ್ಣ ಮಾಹಿತಿ ನೀಡಿ. ಮಾಧ್ಯಮದವರು ಅವರಿಗೆ ಬೇಕಾದಷ್ಟನ್ನು ಬಳಸಿಕೊಳ್ಳುತ್ತಾರೆ.

  • ರಾಜಕೀಯ ವ್ಯಕ್ತಿಗಳ ಪತ್ರಿಕಾಗೋಷ್ಠಿ. ಬಹುಷಃ ಪತ್ರಿಕಾಗೋಷ್ಠಿಗಳು ಆರಂಭವಾಗಿದ್ದೇ ರಾಜಕೀಯ ವರದಿಗಾರಿಕೆಯೊಂದಿಗೆ ಇರಬಹುದೇನೋ! ಸಾಮಾನ್ಯವಾಗಿ ಕೆಲವು ಹಿರಿಯ ನಾಯಕರಿಗೆ ಪತ್ರಿಕಾಗೋಷ್ಠಿ ಹೇಗೆ ಮಾಡಬೇಕು ಎಂದು ತಿಳಿಸಬೇಕಾಗಿಲ್ಲ. ಆದರೆ ಬಹುತೇಕ ‘ಯುವ’ ನಾಯಕರಿಗೆ ಮಾತ್ರ ಇದರ ಬಗ್ಗೆ ಅರಿವಿಲ್ಲ. ಚಿಕ್ಕ ಪುಟ್ಟ ವಿಷಯಗಳಿಗೆ(ಒಂದು ಹೇಳಿಕೆ ನೀಡಬೇಕಾದರೆ ಅದನ್ನ ಪತ್ರಿಕಾಲಯಗಳಿಗೆ ತಲಪಿಸಿದರೆ ಸಾಲದೇ?) ಪತ್ರಿಕಾಗೋಷ್ಠಿ ಕರೆಯುವುದು ಸಮಯ ವ್ಯರ್ಥವಾಗಿಸುವ ಚಟುವಟಿಕೆಯಷ್ಟೇ.

  • ಕೇವಲ ಆಮಂತ್ರಣ ಪತ್ರಿಕೆ ವಿತರಿಸುವ ಪತ್ರಿಕಾಗೋಷ್ಠಿಗಳೇ ಇಂದು ಹೆಚ್ಚುತ್ತಿವೆ. ಕಾರ್ಯಕ್ರಮ ನಿಜಕ್ಕೂ ಮಹತ್ವದ್ದಾದರೆ ಪತ್ರಿಕಾಗೋಷ್ಠಿ ನಡೆಸಬಹುದು. ಆದರೆ ಊರಿನ ಮೂಲೆಯ ಕ್ಲಬ್ಬೊಂದರ ವಾರ್ಷಿಕ ಸಭೆ ನಡೆಸುತ್ತೇವೆ, ಪೂಜೆ, ನಾಟಕ ನಡೆಸುತ್ತೇವೆ ಎನ್ನುವುದಕ್ಕೆ ಆಮಂತ್ರಣ ಪತ್ರಿಕೆ ಕೊಟ್ಟರೆ ಸಾಕು ಪ್ರೆಸ್ ಮೀಟ್ ಬೇಕಿಲ್ಲ.

  • ಎಲ್ಲ ಮಾಧ್ಯಮ ಪ್ರತಿನಿಧಿಗಳೂ ಒಂದೇ ರೀತಿ ಇರಬೇಕಿಲ್ಲ, ಯಾವುದೋ ನಿಮಗೆ ಇಷ್ಟವಾಗದ ಪ್ರಶ್ನೆ ಎದುರಾದರೆ ಅದನ್ನು ಜಾಣ್ಮೆಯಿಂದ ಉತ್ತರಿಸಬಹುದು, ಅದರ ಬದಲು ಎಗರಾಡಿದರೆ ವಾತಾವರಣ ಹಾಳಾಗುತ್ತದೆ ಅಷ್ಟೇ(ಉದಾಹರಣೆ: ಕಾಲೇಜಿನವರು ಪತ್ರಿಕಾಗೋಷ್ಠಿ ನಡೆಸುವಾಗ ಫೀಸ್ ಎಷ್ಟು ಎಂದು ಪ್ರಶ್ನೆ ಎದುರಾದರೆ ಅದನ್ನು ನಿಮಗೆ ಹೇಳಬೇಕಿಲ್ಲ, ಬೇಕಾದರೆ ಚೇಂಬರಿಗೆ ಬನ್ನಿ ಹೇಳುತ್ತೇವೆ ಎಂಬಂತಹ ಉತ್ತರ ಪತ್ರಿಕಾಗೋಷ್ಠಿಯ ದಿಕ್ಕು ತಪ್ಪಿಸುತ್ತವೆ).

  • ಪತ್ರಿಕಾಗೋಷ್ಟಿ ನಡೆಸುವಾಗ ಆದಷ್ಟೂ ಲಿಖಿತ ಮಾಹಿತಿ ನೀಡಿ.(press release, broucher, ಕರಪತ್ರ ಇತ್ಯಾದಿ). ಕೋರ್ಟು ಕಚೇರಿ ಸಂಬಂಧೀ ಸಮಸ್ಯೆಗಳಾಗಿದ್ದರೆ, ಯಾವುದೋ ವ್ಯಕ್ತಿ ಮೇಲೆ ಆರೋಪಗಳಿದ್ದರೆ ಸೂಕ್ತ ದಾಖಲೆಗಳಿರಲಿ.

  • ಅಗತ್ಯ ಇದ್ದವರಷ್ಟೇ ವೇದಿಕೆಯಲ್ಲಿದ್ದರೆ ಚೆನ್ನ. ಅತೀ ಅಗತ್ಯವಿದ್ದಲ್ಲಿ ಮಾತ್ರವೇ ಹೇಳಿಕೆಯನ್ನು ಓದಿ. ಇಲ್ಲವಾದರೆ ನೇರವಾಗಿ ವಿಷಯಕ್ಕೆ ಬಂದು ಸಂಕ್ಷಿಪ್ತ ವಿವರಣೆ ನೀಡಿ. ಫಾರ್ಮಲ್ ಆಗಿ ಪ್ರಾರ್ಥನೆ, ಸ್ವಾಗತ, ವಂದನಾರ್ಪಣೆ ಪತ್ರಿಕಾಗೋಷ್ಠಿಗೆ ಅನಗತ್ಯ.
  • ಅಧಿಕಾರಿಗಳು ಯಾವುದೋ ಹೊಸ ಯೋಜನೆ ಘೋಷಿಸಲು ಪತ್ರಿಕಾಗೋಷ್ಠಿ ಕರೆಯಬಹುದು.

ಕೊನೆಯಲ್ಲೊಂದು ಕಿವಿಮಾತು: ನಿಮ್ಮಲ್ಲಿ ಸುದ್ದಿಯಾಗಬಲ್ಲ ಮಾಹಿತಿ ಇದ್ದರೆ ಅದನ್ನು ಹುಡುಕಿ ಸುದ್ದಿಗಾರರೇ ಬರುತ್ತಾರೆ, ಸುಳಿವು ಕೊಟ್ಟರೂ ಸಾಕು!

3 comments:

Padyana Ramachandra said...
This comment has been removed by the author.
Padyana Ramachandra said...

ಈ ಲೇಖನ ಓದುವಾಗ ಮಂಗಳೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ಮಂಗಳೂರು ಪ್ರತಿನಿಧಿಯಾಗಿದ್ದ ಶ್ರೀ. ಜಿ. ಎನ್ .ಮೋಹನ್ ಅವರು ವ್ಯಕ್ತಪಡಿಸಿದ ಉಲ್ಲೇಖ ಮಂಗಳೂರಿನ ಕಳೆದ ಶತಮಾನದ ಗತಕಾಲದ ಪತ್ರಿಕಾಗೋಷ್ಠಿಯ ನೆನಪನ್ನು ಕೆಣಕಿತು.
-----
ಒಬ್ಬರು ಗೋಪಾಲಕೃಷ್ಣ. ಇನ್ನೊಬ್ಬರು ನರಸಿಂಹರಾಯರು. ಪತ್ರಿಕಾಗೋಷ್ಠಿಯಲ್ಲಿ ಕುಳಿತರಂತೂ ಇಬ್ಬರೂ ಹುಲಿಗಳೇ. ಇವರಿಬ್ಬರೂ ಇದ್ದಾರೆ ಎಂದರೆ ಪತ್ರಿಕಾ ಗೋಷ್ಠಿ ನಡೆಸುವವರಿಗೂ ಆತಂಕ. ಏಕೆಂದರೆ ಸುಳ್ಳು ಮಾತನಾಡುವಂತಿಲ್ಲ. ತಪ್ಪು ಅಂಕಿ ಸಂಖ್ಯೆ ಮುಂದಿಡುವಂತಿಲ್ಲ. ತಿಂಡಿ ಕಾಫಿ ಸಹಾ ಮುಟ್ಟುವುದಿಲ್ಲ. ಗಿಫ್ಟ್ ತೆಗೆದುಕೊಳ್ಳುವ ಮಾತೇ ಇಲ್ಲ.

ದಕ್ಷಿಣ ಕನ್ನಡ ಕಂಡ ಇಬ್ಬರು ನಿಜಕ್ಕೂ ಮಹನೀಯ ಪತ್ರಕರ್ತರು ಇವರು. ಪ ಗೋಪಾಲಕೃಷ್ಣ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿಯಾದರೆ, ನರಸಿಂಹ ರಾಯರು ದಿ ಹಿಂದೂ ಪ್ರತಿನಿಧಿ. 'ಪಾಕೀಟು ಪತ್ರಿಕೋದ್ಯಮ' ದ ಜನಪ್ರಿಯವಾಗಿದ್ದ ದಿನಗಳಲ್ಲಿ ಪತ್ರಕರ್ತರ ನೀತಿ ಸಂಹಿತೆ ಉಳಿಯಲು ತಮ್ಮದೇ ಉದಾಹರಣೆಯ ಮೂಲಕ ಬಡಿದಾಡಿದವರು.
--------
ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್

Arifreporter said...

Salahegalu Upayuktha...