ಮಂಗಳೂರಿನ ಪತ್ರಕರ್ತರಿಗೊಂದು ಅಪರೂಪದ ಅವಕಾಶವಿದು!
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಜನವರಿ ೩೧ರಂದು ಹಿರಿಯ ಪತ್ರಿಕಾಸಂಗ್ರಾಹಕ ಉಮೇಶ್ ರಾವ್ ಎಕ್ಕಾರು ಅವರ ಮನೆಗೇ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಅನುಭವ ಪಡೆದುಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಟೀಲು ಸಮೀಪದ ಎಕ್ಕಾರುವಿನಲ್ಲಿ ನೆಲೆಸಿರುವ ರಾವ್ ಅವರು ಅಪರೂಪದ ವ್ಯಕ್ತಿ. ಕಟೀಲು ಸಂಯುಕ್ತ ಪದವಿಪೂರ್ವ ಕಾಲೇಜಲ್ಲಿ ೩೫ ವರ್ಷ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಉಪಪ್ರಾಂಶುಪಾಲರಾಗಿ ನಿವೃತ್ತರಾದವರು. ಈಗ ಇವರಿಗೆ ೬೮ ವರ್ಷ ಪ್ರಾಯ. ಪತ್ರಿಕಾ ಸಂಗ್ರಹಣೆ ಇವರ ಪ್ರಿಯ ಹವ್ಯಾಸ. ಇವರಲ್ಲಿ ೨೦೦೦ಕ್ಕೂ ಅಧಿಕ ಪತ್ರಿಕೆಗಳ ಸಂಗ್ರಹ ಇದೆ, ೧೦೦೦ಕ್ಕೂ ಹೆಚ್ಚು ಕಥೆ-ಕವನಗಳು ನಾಡಿನ ವಿವಿಧ ಪತ್ರಿಕೆ-ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿರುವ ಇವರನ್ನು ದನ ಮೆಚ್ಚಿದ ಶಿಕ್ಷಕರೆಂದು ಕರೆಯಬಹುದು! ಯಾಕೆಂದರೆ ಇವರಿಗೆ ದನಗಳೆಂದರೆ ಅಚ್ಚುಮೆಚ್ಚು. ಕೇವಲ ಹಾಲುಕೊಡುವ ದನಗಳನ್ನಷ್ಟೇ ಅಲ್ಲ, ಗೊಡ್ಡು ದನಗಳನ್ನೂ ಇವರು ಸಾಕುವವರು.
ಇಂತಹವರಿಂದ ನಾವೆಲ್ಲ ಕಲಿಯುವಂತುಹುದು ಬೇಕಾದಷ್ಟಿದೆ, ಅವರಲ್ಲಿರುವ ವಸ್ತು ವಿಷಯ ಕೂಡಾ ಆಸಕ್ತಿದಾಯಕ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಅಲ್ಲಿ ಅಂದು ನಾವಿರೋಣ, ಕೆಲ ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಇರುತ್ತಾರೆ.....