Sunday, February 7, 2010

ಉಮೇಶ ರಾವ್ ಎಕ್ಕಾರು ಎಂಬ ಮಾತಾಡುವ ಇತಿಹಾಸ

ಇಂದಿನ ಪತ್ರಿಕೆ ನಾಳಿನ ಇತಿಹಾಸ ಎಂಬ ಮಾತನ್ನು ಸಾಕ್ಷೀಕರಿಸಲೋ ಎಂಬ ಹಾಗೆ ಅಷ್ಟೆತ್ತರದ ಪತ್ರಿಕಾ ರಾಶಿ ನಡುವೆ ಕುಳಿತಿದ್ದ ಎಕ್ಕಾರು ಉಮೇಶರಾಯರು ಆ ಕ್ಷಣಕ್ಕೆ ಒಬ್ಬ ಅಪ್ಪಟ ಇತಿಹಾಸಕಾರರಂತೆ ಕಂಡರು. ಹತ್ತಲ್ಲ, ನೂರಲ್ಲ, ಬರೋಬ್ಬರಿ ಮೂರು ಸಾವಿರ ಪತ್ರಿಕೆಗಳು.
ಭಾರತದಲ್ಲಿ ೬೦,೦೦೦ಕ್ಕೂ ಹೆಚ್ಚು ಪತ್ರಿಕೆಗಳಿವೆಯೆಂದು ಪರಿವೀಕ್ಷಣಾ ಸಂಸ್ಥೆಗಳು ಪ್ರಕಟಿಸುವಾಗ ‘ಹೌದಲ್ಲ... ಎಂತಹ ಮಾಧ್ಯಮ ಸಾಮ್ರಾಜ್ಯ ನಮ್ಮದು...’ ಎಂದು ಹೆಮ್ಮೆಪಡುವುದಿದೆ. ಹಾಗೆಂದು ಸುಮ್ಮನೇ ಕುಳಿತು ಒಂದಷ್ಟು ಪತ್ರಿಕೆಗಳ ಪಟ್ಟಿ ಮಾಡೋಣವೆಂದು ಗಂಟೆಗಟ್ಟಲೆ ತಲೆಕೆರೆದುಕೊಂಡರೂ ಅಬ್ಬಬ್ಬಾ ಎಂದರೆ ಇಪ್ಪತ್ತೋ ಮೂವತ್ತೋ ಹೆಸರುಗಳನ್ನು ಕಲೆಹಾಕುವುದೂ ಕಷ್ಟವೆನಿಸೀತು. ಅಂತಹುದರಲ್ಲಿ ಮೂರು ಸಾವಿರ ಪತ್ರಿಕೆಗಳನ್ನು ಸಂಗ್ರಹಿಸಿ ಕಾಪಾಡಿಕೊಂಡು ಬರುವುದೆಂದರೆ ಅದನ್ನೊಂದು ತಪಸ್ಸೆನ್ನದೆ ಬೇರೆ ವಿಧಿಯಿಲ್ಲ.
ಅದಕ್ಕೇ ಉಮೇಶರಾಯರು ಒಬ್ಬ ತಪಸ್ವಿಯಾಗಿಯೂ ಇತಿಹಾಸಕಾರರಾಗಿಯೂ ಕಾಣುತ್ತಾರೆ. ಅವರನ್ನು ಭೆಟ್ಟಿಯಾಗಿ ಅವರ ಅಪೂರ್ವ ಸಂಗ್ರಹವನ್ನು ಕಣ್ತುಂಬಿಕೊಂಡು ಅಭಿನಂದಿಸಿ ಬರೋಣವೆಂದು ಇತ್ತೀಚೆಗೆ (ಜನವರಿ ೩೧, ೨೦೧೦) ಖುದ್ದು ಎಕ್ಕಾರಿಗೆ ಪ್ರಯಾಣ ಬೆಳೆಸಿದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಂಡಕ್ಕೆ ಸಿಕ್ಕಿದ್ದೂ ಇದೇ ನೋಟ.
ಹಲವಾರು ದಶಕಗಳಿಂದ ಜಗತ್ತಿನ ಬೇರೆಬೇರೆ ದೇಶ-ಭಾಷೆಗಳ ಪತ್ರಿಕೆಗಳನ್ನು ಸಂಗ್ರಹಿಸುತ್ತಾ ಅವುಗಳೊಂದಿಗೇ ಸಾಗುತ್ತಾ ಮಾಗುತ್ತಾ ಬಂದಿರುವ ೬೫ರ ಹರೆಯದ ಅವಿವಾಹಿತ ಉಮೇಶರಾಯರಿಗೆ ಪತ್ರಿಕೆಗಳೇ ಕುಟುಂಬ, ಪತ್ರಿಕೆಗಳೇ ಪ್ರಪಂಚ. ಸ್ವತಃ ಒಳ್ಳೆಯ ಬರಹಗಾರರೂ ಓದುಗರೂ ಆಗಿರುವ ರಾಯರು ತಮ್ಮ ಪತ್ರಿಕಾ ಒಡನಾಡಿಗಳೊಂದಿಗೆ ಮೌನವಾಗಿ ಮಾತಾಡಬಲ್ಲರು. ಅಂತಹದೊಂದು ವಿಶಿಷ್ಟ ಭಾಷೆ ಅವರಿಗೆ ಸಿದ್ಧಿಸಿದೆ.
“ಮೂರು ಸಾವಿರವಲ್ಲ, ಇದಕ್ಕಿಂತಲೂ ಹೆಚ್ಚು ಪತ್ರಿಕಾ ಸಂಗ್ರಹವಿದ್ದರೂ ಅದರ ಮೌಲ್ಯ ಹೆಚ್ಚಾಗುವುದು ಅವಶ್ಯಕತೆಯುಳ್ಳವರು ಅದನ್ನು ಹೆಚ್ಚುಹೆಚ್ಚು ಬಳಸಿದಾಗಲೇ. ಹಾಗಾಗಿ ಸಂಶೋಧಕರು, ಅಧ್ಯಾಪಕರು, ವಿದ್ಯಾರ್ಥಿಗಳು, ಕುತೂಹಲಿಗಳು ಯಾರು ಬೇಕಾದರೂ ಬನ್ನಿ, ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ...” ಎಂದು ಮುಕ್ತವಾಗಿ ಹೇಳಿಕೊಳ್ಳುವ ಉಮೇಶರಾಯರಿಗೆ ಸ್ವತಃ ಪತ್ರಕರ್ತರ ತಂಡವೇ ತಮ್ಮ ಪಡಸಾಲೆಯಲ್ಲಿ ಬಂದು ಕುಳಿತದ್ದು ಕಂಡು ಅತೀವ ಸಂಭ್ರಮ.
ಮಾಧ್ಯಮ ಪ್ರತಿನಿಧಿಗಳಿಗೂ ಅವರೊಂದಿಗಿದ್ದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಅದೊಂದು ಅಪೂರ್ವ ಕ್ಷಣ. ಆವರೆಗೆ ಕಂಡು ಕೇಳರಿಯದ ಪತ್ರಿಕೆಗಳು, ಕೇಳಿದ್ದರೂ ಕಂಡಿರದ ಪತ್ರಿಕೆಗಳು, ಬಹಳ ಕಾಲದಿಂದ ನೋಡಬೇಕೆಂದುಕೊಂಡಿದ್ದ ಪತ್ರಿಕೆಗಳು, ಶತಾಯುಷಿ ಪತ್ರಿಕೆಗಳು, ದೈನಿಕ-ಸಾಪ್ತಾಹಿಕ-ಪಾಕ್ಷಿಕ-ಮಾಸಿಕ-ತ್ರೈಮಾಸಿಕ ತರಹೇವಾರಿ ಶೀರ್ಷಿಕೆಗಳು... ಎಲಾ ಎಲಾ ಹೀಗೂ ಉಂಟೆ ಎಂದು ಅವರೊಳಗೇ ಕೌತುಕಗೊಳ್ಳುವ ಸರದಿ.
‘ಅದು ಎಷ್ಟು ಹಳತೆಂದರೆ ನಿನ್ನೆಯ ಪತ್ರಿಕೆಯಷ್ಟು...’ ಎಂಬೊಂದು ಗಾದೆಯಿದೆ ಇಂಗ್ಲೆಂಡಿನಲ್ಲಿ. ಅತ್ಯಂತ ಹಳೆಯದು, ನಿಷ್ಪ್ರಯೋಜಕ ಎಂಬರ್ಥದ ಮಾತಿಗಾಗಿ ಈ ಗಾದೆ ಬಳಕೆಯಾಗುವುದಿದೆ. ಇಂದಿನ ಸುದ್ದಿ ನಾಳೆಯ ರದ್ದಿ ಎಂದು ನಮ್ಮವರೂ ಹೇಳುವುದಿದೆ. ಅಂಥವರೆಲ್ಲರೂ ಉಮೇಶರಾಯರ ಸಂಗ್ರಹ ಕಂಡಮೇಲೆ ತಮ್ಮ ನಿರ್ಧಾರ ಬದಲಾಯಿಸಿ ‘ಓಲ್ಡ್ ಈಸ್ ಗೋಲ್ಡ್’ ಎಂದು ಉದ್ಗರಿಸದೇ ಇರಲಾರರು. ಒಂದು ಸಂಗ್ರಹಯೋಗ್ಯ ಸಂಚಿಕೆಯೇನು, ತೆಗೆದಿರಿಸಿಕೊಳ್ಳಬೇಕು ಎಂದುಕೊಂಡ ಒಂದು ಲೇಖನವೇ ವಾರ ಕಳೆಯುವಷ್ಟರಲ್ಲಿ ಕೈತಪ್ಪಿ ಹೋಗುವುದಿದೆ; ಆ ಬಳಿಕ ಊರೂರು ಅಲೆದರೂ ಆ ಪ್ರತಿ ಸಿಗುವುದೇ ಇಲ್ಲ. ಅಂತಹುದರಲ್ಲಿ ಸಾವಿರಾರು ಪತ್ರಿಕೆಗಳನ್ನು ಇಟ್ಟುಕೊಳ್ಳುವುದೆಂದರೆ ತಮಾಷೆಯಾ?
೧೮೮೪ರ ‘ಕ್ರೈಸ್ತ ಸಭಾ ಪತ್ರ’ ಉಮೇಶರಾಯರ ಬಳಿಯಿರುವ ಅತ್ಯಂತ ಹಳೆಯ ಸಂಗ್ರಹ. ೧೯೧೧ ಮೇ ತಿಂಗಳ ‘ಸುಪಂಥ’ (ಬೆಲೆ: ಎರಡು ಆಣೆ), ೧೯೨೨ರ ‘ಆತ್ಮಾಹ್ಲಾದಿನೀ’ ಎಂಬ ಮಾಸಿಕ, ೧೯೨೭ ಅಕ್ಟೋಬರ್ ತಿಂಗಳ ‘ಸುವಾಸಿನಿ’, ೧೯೩೨ರ ಡಿಸೆಂಬರ್ ತಿಂಗಳ ‘ಸದ್ಬೋಧ ಚಂದ್ರಿಕೆ’, ೧೯೩೪ರ ‘ಮಕ್ಕಳ ಪುಸ್ತಕ’, ೧೯೪೮ ಫೆಬ್ರವರಿ ೧೨ರ ‘ಮದ್ರಾಸು ಸಮಾಚಾರ’ (ಮಹಾತ್ಮಾ ಗಾಂಧಿ ಮರಣಾನಂತರದ ಶೋಕ ಪ್ರದರ್ಶನಾಂಕ), ೧೯೫೧ ಡಿಸೆಂಬರ್ ತಿಂಗಳ ‘ಜಯಕರ್ನಾಟಕ’ ಸಂಚಿಕೆ (ಬೆಲೆ: ಆರು ಆಣೆ), ೧೯೬೫ರ ಕಡೆಂಗೋಡ್ಲು ಶಂಕರಭಟ್ಟ ಸಂಪಾದನೆಯ ‘ರಾಷ್ಟ್ರಮತ’, ೧೯೬೬ರಲ್ಲಿ ದಿ| ಎಂ. ವ್ಯಾಸ ಅವರು ಸಂಪಾದಿಸುತ್ತಿದ್ದ ‘ಅಜಂತ’, ೧೯೬೬ರ ಅಕ್ಟೋಬರ್ ತಿಂಗಳ ‘ಗೋಕುಲ’, ೧೯೭೭ ಫೆಬ್ರವರಿ ೧೫ರ ‘ಮಂಗಳೆ’... ಹೌದು, ಉಮೇಶರಾಯರ ಪತ್ರಿಕಾ ರಾಶಿಯೊಳಗೆ ಹೊಕ್ಕುಬಿಟ್ಟರೆ ಇತಿಹಾಸಕ್ಕೇ ಬಾಯಿಬಂದುಬಿಡುತ್ತದೆ.
ತುಳುರಾಜ್ಯ, ತುಳುನಾಡು, ಸುಯಿಲ್, ಉರಲ್, ಮದಿಪು, ತೂಟೆ, ತುಳುಬೊಳ್ಳಿ, ತುಳುವರ್ತಮಾನ, ತುಳುದರ್ಶನ, ತೆಂಬರೆ, ಎಂಕ್ಲೆನ ಚಾವಡಿ, ತುಳುವೆರೆ ಕೇದಗೆ, ತುಳುವೆರೆ ತುಡರ್, ತುಳುಸಿರಿ, ಪತ್ತಾಯ, ಪೊಸಕುರಲ್ ನಂತಹ ಸಾಲುಸಾಲು ತುಳುಪತ್ರಿಕೆಗಳು, ಅಮ್ಚೀಮಾಯಿ, ಜೀವಿತ್, ದಿರ್ವೆ, ಕಲಾಕಿರಣ್, ಮಿತ್ರ್, ಪಂಚ್‌ಕಜಾಯ್‌ನಂತಹ ತರಹೇವಾರಿ ಕೊಂಕಣಿ ಪತ್ರಿಕೆಗಳು, ದೇವನಾಗರಿ ಲಿಪಿಯಲ್ಲಿರುವ ಕನ್ನಡ ಪತ್ರಿಕೆ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ, ಲಂಕೇಶ್ ಪತ್ರಿಕೆ, ಉದಯವಾಣಿ, ತುಷಾರ, ಸುಧಾಗಳಂತಹ ಪತ್ರಿಕೆಗಳ ಮೊತ್ತಮೊದಲ ಸಂಚಿಕೆಗಳು, ಕಡತೋಕಾ ಮಂಜುನಾಥ ಭಾಗವತರು ಸಂಪಾದಿಸುತ್ತಿದ್ದ ಯಕ್ಷಗಾನ, ಬಾಲಗಂಗಾಧರ ತಿಲಕ್‌ರ ಕೇಸರಿ, ಕಾಶ್ಮೀರ, ಅಂಡಮಾನ್ ನಿಕೋಬಾರ್, ಮಲೇಶಿಯಾ, ಚೀನಾ, ಅಮೆರಿಕಾ, ಆಸ್ಟ್ರೇಲಿಯಾ, ಬ್ರಿಟನ್ ಮೊದಲಾದ ಕಡೆಗಳ ಪ್ರಖ್ಯಾತ ಪತ್ರಿಕೆಗಳು... ಅಲ್ಲಿ ಏನುಂಟು ಏನಿಲ್ಲ! ದ.ಕ.ದಲ್ಲೇ ಹುಟ್ಟಿಕೊಂಡ ೫೦೦ಕ್ಕೂ ಮಿಕ್ಕು ಪತ್ರಿಕೆಗಳು ಆ ರಾಶಿಯಲ್ಲಿವೆ.
ಮೂವತ್ತೈದು ವರ್ಷ ಕಟೀಲು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಉಪಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ ಉಮೇಶರಾಯರಿಗೆ ತಮ್ಮ ಸಣ್ಣವಯಸ್ಸಿನಿಂದಲೂ ಪತ್ರಿಕೆಗಳ ಬಗ್ಗೆ ಅತೀವ ಆಸಕ್ತಿ. ೧೯೬೦ರಿಂದೀಚೆಗೆ ಸುದೀರ್ಘಕಾಲ ಕನ್ನಡದ ಪತ್ರಿಕೆಗಳಿಗೆ ಅಂಕಣಕಾರರಾಗಿ ಲೇಖಕರಾಗಿ ದುಡಿದ ಅವರು ಇದುವರೆಗೆ ಬರೆದ ಲೇಖನಗಳು ೧೩೦೦ಕ್ಕಿಂತಲೂ ಹೆಚ್ಚು. ಪ್ರಪಂಚ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ, ಕಸ್ತೂರಿಗಳನ್ನು ಇಂದಿಗೂ ತಮ್ಮ ಫೇವರಿಟ್ ಪತ್ರಿಕೆಗಳನ್ನಾಗಿ ಗುರುತಿಸುವ ರಾಯರು ತಮ್ಮ ಆಸಕ್ತಿಗೆ ನೀರೆರೆದು ಪೋಷಿಸಿದ ಶೇಖರ್ ಇಡ್ಯ, ಶ್ರೀನಿವಾಸ ಭಟ್, ಹರಿಕೃಷ್ಣ ಪುನರೂರು, ಮುಖ್ಯ ಪ್ರೇರಣಾಶಕ್ತಿಗಳಾದ ಕುಡ್ಪಿ ವಾಸುದೇವ ಶೆಣೈ, ಖಾದ್ರಿ ಶಾಮಣ್ಣ ಹಾಗೂ ಕಡೆಂಗೋಡ್ಲು ಶಂಕರ ಭಟ್ಟರನ್ನು ಮನಸಾರೆ ನೆನೆಯುತ್ತಾರೆ.
ಪತ್ರಿಕೆಗಳ ಮೇಲಿರುವಷ್ಟೇ ಆಸಕ್ತಿಯನ್ನು ಕೃಷಿಯಲ್ಲೂ ಉಳಿಸಿಕೊಂಡಿರುವವರು ಉಮೇಶರಾಯರು. ವಿಧವಿಧದ ತರಕಾರಿ-ಹೂವು-ಹಣ್ಣು-ಸೊಪ್ಪು ಅವರ ತಣ್ಣಗಿನ ಮನೆಯ ಪರಿಸರವನ್ನು ಇನ್ನಷ್ಟು ಸುಂದರವಾಗಿಸಿದೆ. ಅಲ್ಲೊಂದು ಪುಟ್ಟ ಅಡಿಕೆ ತೋಟವೂ ಇದೆ. ತಮ್ಮ ಆನಂದಕ್ಕಾಗಿ ಒಂದಷ್ಟು ದನಕರುಗಳನ್ನೂ ರಾಯರು ಸಾಕಿಕೊಂಡಿದ್ದಾರೆ. “ಬೆಳಗ್ಗೆ ಎದ್ದು ನಾನು ಮಾಡುವ ಮೊದಲ ಕೆಲಸ ಈ ದನಗಳಿಗೆ ಹುಲ್ಲು-ನೀರು ಒದಗಿಸುವುದು,” ಎನ್ನುವ ಅವರು “ತಿಂಡಿ-ಕಾಫಿಗಿಂತ ಬೆಳಗ್ಗಿನ ಪೇಪರುಗಳಲ್ಲಿ ಸಿಗುವ ಆಹಾರವೇ ನನಗೆ ಮುಖ್ಯ” ಎನ್ನುವ ಮೂಲಕ ತನ್ನ ಮುಂದಿನ ಆದ್ಯತೆ ಯಾವುದೆಂಬುದನ್ನು ನೇರವಾಗಿ ಬಿಚ್ಚಿಡುತ್ತಾರೆ.
ರಾಯರಲ್ಲಿ ವ್ಯವಸ್ಥಿತ ಗ್ರಂಥಾಲಯವಿದೆ; ನೂರಾರು ಸ್ಮರಣ ಸಂಚಿಕೆಗಳು, ಆಧಾರಗ್ರಂಥಗಳಿವೆ. ದಿನಚರಿ, ಲೆಕ್ಕಾಚಾರ ಎಲ್ಲವೂ ಅಚ್ಚುಕಟ್ಟು. ಪತ್ರಿಕೆ ಓದುವಾಗ, ಭಾಷಣ ಕೇಳುವಾಗ ನೆನಪಿಟ್ಟುಕೊಳ್ಳಬೇಕಾದ್ದಿದೆ ಆನ್ನಿಸಿದರೆ, ಅದನ್ನು ಬರೆದಿಡುವುದಕ್ಕೆ ಪ್ರತ್ಯೇಕ ಡೈರಿಯಿದೆ. ಶಿಸ್ತು ಅವರ ಹುಟ್ಟುಗುಣ.
ಇಷ್ಟು ದೂರ ಸಾಗಿಬಂದ ಮೇಲೂ ತಮಗೆ ದೊರೆಯಬೇಕಾಗಿದ್ದ ಗೌರವವಾಗಲೀ, ಪ್ರಾತಿನಿಧ್ಯವಾಗಲೀ ದೊರೆಯದಿರುವ ಬಗ್ಗೆ ರಾಯರಿಗೆ ಒಂದಷ್ಟು ಬೇಸರ, ಸಂಕಟಗಳಿವೆ. ಹಾಗೆಂದು ತನ್ನನ್ನು ಗುರುತಿಸಿ ಎಂದು ಯಾವತ್ತೂ ಅವರು ಅಂಗಲಾಚಿ ಹೋದವರಲ್ಲ. ಅವರದ್ದು ಸ್ವಾಭಿಮಾನದ ಬದುಕು. ಸಂಶೋಧಕರಿಗಾಗಿ, ವಿದ್ಯಾರ್ಥಿಗಳಿಗಾಗಿ, ಇತಿಹಾಸ ಆಸಕ್ತರಿಗಾಗಿ ತಾನು ಇಷ್ಟಾದರೂ ಮಾಡಿದ್ದೇನಲ್ಲ ಎಂಬ ಧನ್ಯತಾಭಾವ ಅವರಲ್ಲಿದೆ. ರಾಜ್ಯಮಟ್ಟದಲ್ಲಿ, ಜಿಲ್ಲಾಮಟ್ಟಗಳಲ್ಲಿ ಪೂರ್ಣಪ್ರಮಾಣದ ಪತ್ರಿಕಾ ಸಂಗ್ರಹಾಲಯಗಳಾಗಬೇಕು, ಅವು ಆಸಕ್ತರ ಅಧ್ಯಯನ ಕೇಂದ್ರಗಳಾಗಬೇಕು, ಅವುಗಳಿಗೆ ತನ್ನ ಕೈಲಾದ ಸಹಕಾರ ನೀಡಬೇಕು ಎಂಬೆಲ್ಲ ಕನಸು-ಮಹತ್ವಾಕಾಂಕ್ಷೆ-ಲವಲವಿಕೆ ಅವರಿಗೆ ಈ ಇಳಿಹರೆಯದಲ್ಲೂ ಇದೆ.
ಅಂತಹದೊಂದು ಹಿರಿಜೀವಕ್ಕೆ ಅವರ ಮನೆಯ ಚಾವಡಿಯಲ್ಲೇ ಶಾಲುಹೊದೆಸಿ ಸನ್ಮಾನಿಸಿ ಹೆಮ್ಮೆಪಟ್ಟಿತು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ. ಆ ಅಪೂರ್ವ ಕ್ಷಣಕ್ಕೆ ಸಾಕ್ಷಿಗಳಾದವರು ದ.ಕ. ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ, ಸಂಘದ ಉಪಾಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಟಿ. ಎನ್. ಬಾಳೇಪುಣಿ ಹಾಗೂ ಜತೆಗಿದ್ದ ಪತ್ರಕರ್ತರು, ವಿದ್ಯಾರ್ಥಿಗಳು.
“ಪ್ರತೀ ಪತ್ರಿಕೆಗೂ ಹೇಳುವುದಕ್ಕೆ ತನ್ನದೇ ಆದ ಒಂದು ಕಥೆಯಿರುತ್ತದೆ. ಕೇಳುವುದಕ್ಕೆ ನಮಗೆ ತಾಳ್ಮೆ-ಸಮಯ ಬೇಕು ಅಷ್ಟೆ” ಎಂದಿದ್ದ ಉಮೇಶರಾಯರ ಮನೆಯಿಂದ ಹೊರಡುತ್ತಿರಬೇಕಾದರೆ, ಕೇಳದೆ ಉಳಿದಿರುವ ಕಥೆಗಳೆಷ್ಟಿವೆಯೋ ಎಂದು ಅಚ್ಚರಿಪಡುವ ಸರದಿ ಪತ್ರಕರ್ತರದಾಗಿತ್ತು.
-ಸಿಬಂತಿ ಪದ್ಮನಾಭ

Thursday, January 28, 2010

ಬನ್ನಿ ಈ ಪತ್ರಿಕಾ ಸಂಗ್ರಾಹಕರ ಮನೆಗೆ.

ಮಂಗಳೂರಿನ ಪತ್ರಕರ್ತರಿಗೊಂದು ಅಪರೂಪದ ಅವಕಾಶವಿದು!
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಜನವರಿ ೩೧ರಂದು ಹಿರಿಯ ಪತ್ರಿಕಾಸಂಗ್ರಾಹಕ ಉಮೇಶ್ ರಾವ್‌ ಎಕ್ಕಾರು ಅವರ ಮನೆಗೇ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಅನುಭವ ಪಡೆದುಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಟೀಲು ಸಮೀಪದ ಎಕ್ಕಾರುವಿನಲ್ಲಿ ನೆಲೆಸಿರುವ ರಾವ್ ಅವರು ಅಪರೂಪದ ವ್ಯಕ್ತಿ. ಕಟೀಲು ಸಂಯುಕ್ತ ಪದವಿಪೂರ್ವ ಕಾಲೇಜಲ್ಲಿ ೩೫ ವರ್ಷ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಉಪಪ್ರಾಂಶುಪಾಲರಾಗಿ ನಿವೃತ್ತರಾದವರು. ಈಗ ಇವರಿಗೆ ೬೮ ವರ್ಷ ಪ್ರಾಯ. ಪತ್ರಿಕಾ ಸಂಗ್ರಹಣೆ ಇವರ ಪ್ರಿಯ ಹವ್ಯಾಸ. ಇವರಲ್ಲಿ ೨೦೦೦ಕ್ಕೂ ಅಧಿಕ ಪತ್ರಿಕೆಗಳ ಸಂಗ್ರಹ ಇದೆ, ೧೦೦೦ಕ್ಕೂ ಹೆಚ್ಚು ಕಥೆ-ಕವನಗಳು ನಾಡಿನ ವಿವಿಧ ಪತ್ರಿಕೆ-ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿರುವ ಇವರನ್ನು ದನ ಮೆಚ್ಚಿದ ಶಿಕ್ಷಕರೆಂದು ಕರೆಯಬಹುದು! ಯಾಕೆಂದರೆ ಇವರಿಗೆ ದನಗಳೆಂದರೆ ಅಚ್ಚುಮೆಚ್ಚು. ಕೇವಲ ಹಾಲುಕೊಡುವ ದನಗಳನ್ನಷ್ಟೇ ಅಲ್ಲ, ಗೊಡ್ಡು ದನಗಳನ್ನೂ ಇವರು ಸಾಕುವವರು.
ಇಂತಹವರಿಂದ ನಾವೆಲ್ಲ ಕಲಿಯುವಂತುಹುದು ಬೇಕಾದಷ್ಟಿದೆ, ಅವರಲ್ಲಿರುವ ವಸ್ತು ವಿಷಯ ಕೂಡಾ ಆಸಕ್ತಿದಾಯಕ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಅಲ್ಲಿ ಅಂದು ನಾವಿರೋಣ, ಕೆಲ ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಇರುತ್ತಾರೆ.....

Thursday, January 21, 2010

ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಸಭೆ


ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಭೆ ಸರ್ವ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ಜ.೨೦ರಂದು ನೆರವೇರಿತು.
ಸಭೆಯಲ್ಲಿ ಚರ್ಚೆಯಾಗಿ ತೆಗೆದುಕೊಳ್ಳಲಾದ ಕೆಲವು ನಿರ್ಧಾರಗಳು. ಇಲ್ಲಿವೆ.
  • ಅಪಘಾತ ವಿಮೆ ಮಾಡಿಸಿದರೆ ಅನೇಕ ಸಂದರ್ಭಗಳಲ್ಲಿ ಪತ್ರಕರ್ತರಿಗೆ ಯಾವುದೇ ನೆರವು ಸಿಗುವುದಿಲ್ಲ, ಅದರ ಬದಲಾಗಿ ಆರೋಗ್ಯ ವಿಮೆ ಮಾಡಿಸಿದರೆ ಹೆಚ್ಚಿನ ಅನಾರೋಗ್ಯಗಳೂ ಇದರಲ್ಲಿ ಒಳಗೊಂಡಿದ್ದು ಪತ್ರಕರ್ತರಿಗೆ ಅನುಕೂಲವಾಗಬಹುದು ಎಂಬ ವಿಷಯ ಚರ್ಚೆಯಾಯಿತು. ಈ ಬಗ್ಗೆ ಮುಂದೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಮುಂದಿನ ವರ್ಷಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

  • ಮಂಗಳೂರಿನ ಲೇಡಿಹಿಲ್-ಉರ್ವಾಸ್ಟೋರ‍್ ರಸ್ತೆಗೆ ಪತ್ರಿಕಾಭವನ ರಸ್ತೆ ಎಂದು ನಾಮಕರಣ ಮಾಡುವ ಪ್ರಸ್ತಾವಕ್ಕೆ ಮಂಗಳೂರು ಮಹಾನಗರಪಾಲಿಕೆ ಒಪ್ಪಿಗೆ ಸೂಚಿಸಿದೆ, ಆದರೆ ಇದಕ್ಕೆ ಸರ್ಕಾರದ ಒಪ್ಪಿಗೆ ದೊರಕಬೇಕಿದೆ.

  • ವಾಹನಗಳಲ್ಲಿ PRESS ಪದದ ದುರ್ಬಳಕೆ ಇದೀಗ ಮತ್ತೆ ಗರಿಕೆದರಿದೆ ಎಂಬ ದೂರು ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಇಲಾಖೆ ಮತ್ತೆ ಪತ್ರಕರ್ತರ ಗುರುತುಪತ್ರ ಪಡೆದು ಸೂಕ್ತ ಸ್ಟಿಕ್ಕರ್‌ ನೀಡುವಂತೆ ಒತ್ತಾಯಿಸಲು ನಿರ್ಧರಿಸಲಾಯಿತು. ಅಲ್ಲದೆ ನಕಲಿ ಸ್ಟಿಕ್ಕರ‍್ ಹಾವಳಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕೇಳಿಕೊಳ್ಳಲಾಗುವುದು.

  • ಕಳೆದ ಬಾರಿ ಫಡಿಂಜೆ ವಾಳ್ಯಕ್ಕೆ ಪತ್ರಕರ್ತರ ಸಂಘದ ಸದಸ್ಯರು ಭೇಟಿ ನೀಡಿ ಸಮಗ್ರ ವರದಿ ಮಾಡಿರುವುದು ಶ್ಲಾಘನೆಗೊಳಗಾದ ವಿಚಾರವಾದ್ದರಿಂದ ಅಂತಹ ಗ್ರಾಮೀಣ ಭೇಟಿ ಕಾರ್ಯಕ್ರಮಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು. ಮುಂದೆ ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶವೊಂದಕ್ಕೆ ಭೇಟಿ ಹಮ್ಮಿಕೊಳ್ಳಲಾಗುವುದು.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೇರಿದ ಸಂಘದ ಸದಸ್ಯರ ಸಮಕ್ಷಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಗುರುವಪ್ಪ ಎನ್‌.ಟಿ.ಬಾಳೆಪುಣಿ ವರದಿ ಓದಿ ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷ ಶ್ರೀ ಹರ್ಷ, ಉಪಾಧ್ಯಕ್ಷ ಶ್ರೀ ರಾಮಕೃಷ್ಣ ಆರ‍್, ಕಾರ್ಯದರ್ಶಿ ಶ್ರೀ ಮಿಥುನ್ ಕೊಡೆತ್ತೂರು, ಶ್ರೀ ಪುಷ್ಪರಾಜ್ ಬಿ.ಎನ್ ಪಾಲ್ಗೊಂಡಿದ್ದರು.

Tuesday, August 25, 2009

ಗ್ರಾಮೀಣ ಸಮಸ್ಯೆ ಬೆಳಕಿಗೆ ತನ್ನಿ: ಪಾಲೆಮಾರ‍್ ಕಿವಿಮಾತು


೨೦೦೮ನೇ ಸಾಲಿನ ಪ.ಗೋ ಪ್ರಶಸ್ತಿಯನ್ನು ಇಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪರಿಸರ, ಜೀವಿಶಾಸ್ತ್ರ ಮತ್ತು ಬಂದರು ಖಾತೆ ಸಚಿವ ಕೃಷ್ಣಪಾಲೆಮಾರ‍್ ಅವರು ಪತ್ರಕರ್ತ ಹೃಷಿಕೇಶ್ ಧರ್ಮಸ್ಥಳ ಅವರಿಗೆ ಪ್ರದಾನ ಮಾಡಿದರು.

ಕನ್ನಡಪ್ರಭ ಉಜಿರೆ ವರದಿಗಾರರಾಗಿರುವ ಹೃಷಿಕೇಶ್ ಧರ್ಮಸ್ಥಳ ಅವರು ಬರೆದ ಬಾರದ ಸವಲತ್ತಿಗೆ ಕಾದಿದೆ ಜನತೆ ಎಂಬ ವರದಿ ೨೦೦೮ರ ಅಕ್ಟೋಬರ ೩ರಂದು ಪ್ರಕಟಗೊಂಡಿತ್ತು.

ಗ್ರಾಮೀಣ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಅಥವಾ ಅಲ್ಲಿನ ಧನಾತ್ಮಕ ಬೆಳವಣಿಗೆಗಳ ಬಗ್ಗೆ ಮಾಡಲಾದ ಅತ್ಯುತ್ತಮ ವರದಿಯನ್ನು ಪ.ಗೋ ಪ್ರಶಸ್ತಿಗೆ ಆರಿಸಲಾಗುತ್ತಿದೆ. ೧೯೯೯ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಹಿರಿಯ ಪತ್ರಕರ್ತ ಯು.ನರಸಿಂಹರಾವ್ ಅವರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಸಚಿವ ಕೃಷ್ಣ ಪಾಲೆಮಾರ‍್ ಮಾತನಾಡಿ, ಹಿಂದಿನ ಪತ್ರಕರ್ತರಂತೆ ಇಂದಿನ ಯುವ ಪತ್ರಕರ್ತರೂ ನಿಷ್ಠುರವಾಗಿದ್ದು ಗ್ರಾಮೀಣ ಸಮಸ್ಯೆಗಳನ್ನು ಬೆಳಕಿಗೆ ತರಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಗಳಲ್ಲಿ ಆಗುವಂತಹ ಸಮಸ್ಯೆಗಳನ್ನು ವರದಿಗಾರರು ಗಮನಕ್ಕೆ ತಂದಾಗ ಸರ್ಕಾರಕ್ಕೂ ತಿಳಿಯುತ್ತದೆ, ಆ ಮೂಲಕ ಅವುಗಳನ್ನು ಬಗೆಹರಿಸಬಹುದು ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್‌.ಟಿ ಬಾಳೆಪುಣಿ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಹರೀಶ್ ರೈ, ಸಂಘದ ಖಜಾಂಚಿ ಯೋಗೀಶ ಹೊಳ್ಳ ಪಾಲ್ಗೊಂಡರು. ಪ.ಗೋ ಕುಟುಂಬದವರು, ನರಸಿಂಹರಾವ್ ಕುಟುಂಬಸ್ಥರೂ ಕಾರ್ಯಕ್ರಮದಲ್ಲಿ ಹಾಜರಿದ್ದರು

Monday, August 17, 2009

ಹೆಗ್ಗಡೆಯವರೊಂದಿಗೆ ಸಂವಾದ


ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆ.೧೯ರಂದು ಸಂಜೆ ೪ ಗಂಟೆಗೆ ಸಂವಾದ ಏರ್ಪಡಿಸಲಾಗಿದೆ.

ಗ್ರಾಮೀಣಾಭಿವೃದ್ಧಿಯಲ್ಲಿ ತಮ್ಮ ಅನುಭವ, ಗ್ರಾಮೀಣಾಭಿವೃದ್ಧಿ ಯೋಜನೆ ಕುರಿತ ಕೆಲ ವಿಚಾರಗಳನ್ನು ಹೆಗ್ಗಡೆ ಅವರು ಸಂವಾದದಲ್ಲಿ ತೆರೆದಿಡಲಿದ್ದಾರೆ.
ಮಾಧ್ಯಮ ಮಿತ್ರರು ಎಂದಿನಂತೆ ಸಹಕರಿಸಬೇಕಾಗಿ ವಿನಂತಿ.

ಪ.ಗೋ ಪ್ರಶಸ್ತಿ ಮೊತ್ತದಲ್ಲಿ ಏರಿಕೆ

ಬಾರಿಯಿಂದ ಪ.ಗೋ ಪ್ರಶಸ್ತಿಗೆ ನೀಡುವ ಪ್ರಶಸ್ತಿ ಮೊತ್ತದಲ್ಲಿ ಏರಿಕೆಯಾಗಿದೆ.
೨೦೦೪ರಿಂದಲೇ ಪ್ರಶಸ್ತಿ ಮೊತ್ತವನ್ನು ಪ್ರಾಯೋಜಿಸುವ ಮೂಲಕ ಪ.ಗೋ ಟ್ರಸ್ಟ್‌ಗೆ ನೆರವಾಗುತ್ತಿದ್ದವರು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು.

ಈ ಬಾರಿ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವಂತೆ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಶ್ರೀ ಹೆಗ್ಗಡೆಯವರ ಕಚೇರಿಗೆ ತೆರಳಿ ಮನವಿ ಮಾಡಿಕೊಂಡರು. ಪ್ರಶಸ್ತಿ ಮೊತ್ತ ಕಡಮೆಯಾಗಿದ್ದು, ಅದನ್ನು ಏರಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೆಗ್ಗಡೆಯವರು ಪ್ರಶಸ್ತಿ ಮೊತ್ತವನ್ನು ೫೦೦೧ ರು.ಗೆ ಏರಿಸಲು ಒಪ್ಪಿಕೊಂಡರು. ಅವರ ಮಾರ್ಗದರ್ಶನಕ್ಕೆ ಪತ್ರಕರ್ತರ ಸಂಘ ಆಭಾರಿ. ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಬಾಳೆಪುಣಿ, ಖಜಾಂಚಿ ಯೋಗೀಶ್ ಹೊಳ್ಳ, ಮಂಗಳೂರು ಪ್ರೆಸ್‌ ಕ್ಲಬ್‌ ಜತೆ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ನಿಯೋಗದಲ್ಲಿದ್ದರು.

ಹೃಷಿಕೇಶ್‌ಗೆ ಪ.ಗೋ ಪ್ರಶಸ್ತಿ

ದಿವಂಗತರಾಗಿರುವ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಅತ್ಯುತ್ತಮ ಗ್ರಾಮೀಣವರದಿಗಾರಿಕೆ ಪ್ರಶಸ್ತಿಗೆ ಈ ಬಾರಿ ಕನ್ನಡಪ್ರಭ ಪತ್ರಿಕೆಯ ಧರ್ಮಸ್ಥಳ-ಉಜಿರೆ ಸುದ್ದಿಗಾರ ಹೃಷಿಕೇಶ್ ಧರ್ಮಸ್ಥಳ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭದಲ್ಲಿ ಅಕ್ಟೋಬರ‍್ ೩, ೨೦೦೮ರಲ್ಲಿ ಪ್ರಕಟಗೊಂಡ ಬಾರದ ಸವಲತ್ತಿಗೆ ಕಾದಿದೆ ಜನತೆ ಎಂಬ ವರದಿ ಪ್ರಶಸ್ತಿ ಗಳಿಸಿದೆ. ಇದು ೨೦೦೮ರ ಸಾಲಿನ ಪ್ರಶಸ್ತಿಯಾಗಿರುತ್ತದೆ.
ಗ್ರಾಮೀಣಮಟ್ಟದಲ್ಲಿ ಇರುವ ಅನೇಕ ಸಮಸ್ಯೆಗಳು, ಅಭಿವೃದ್ಧಿಗೆ ಗ್ರಾಮೀಣ ಭಾಗದಲ್ಲಿರುವ ಮಾದರಿಗಳು ಇತ್ಯಾದಿಗಳ ಬಗ್ಗೆ ಬರೆಯಲಾದ ಅತ್ಯುತ್ತಮ ವರದಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ ಅಂಕಣ ಬರೆಯುತ್ತಿದ್ದವರು.
ಪ.ಗೋ ಸ್ಮಾರಕಾರ್ಥವಾಗಿ ಟ್ರಸ್ಟಿನ ವತಿಯಿಂದ ೧೯೯೯ರಲ್ಲಿ ಪ್ರಾರಂಭಿಸಿದ ಉತ್ಕೃಷ್ಟ ಗ್ರಾಮೀಣ ವರದಿಗೆ ನೀಡುವ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಈಗ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುನ್ನಡೆಸುವ ನಿರ್ಣಯವನ್ನು ಹಮ್ಮಿಕೊಂಡಿದೆ. ಈ ವರ್ಷ ಮೊದಲ ಬಾರಿಗೆ ಪತ್ರಕರ್ತರ ಸಂಘ ಪ್ರಶಸ್ತಿ ನೀಡುತ್ತಿದೆ.