Tuesday, August 25, 2009

ಗ್ರಾಮೀಣ ಸಮಸ್ಯೆ ಬೆಳಕಿಗೆ ತನ್ನಿ: ಪಾಲೆಮಾರ‍್ ಕಿವಿಮಾತು


೨೦೦೮ನೇ ಸಾಲಿನ ಪ.ಗೋ ಪ್ರಶಸ್ತಿಯನ್ನು ಇಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪರಿಸರ, ಜೀವಿಶಾಸ್ತ್ರ ಮತ್ತು ಬಂದರು ಖಾತೆ ಸಚಿವ ಕೃಷ್ಣಪಾಲೆಮಾರ‍್ ಅವರು ಪತ್ರಕರ್ತ ಹೃಷಿಕೇಶ್ ಧರ್ಮಸ್ಥಳ ಅವರಿಗೆ ಪ್ರದಾನ ಮಾಡಿದರು.

ಕನ್ನಡಪ್ರಭ ಉಜಿರೆ ವರದಿಗಾರರಾಗಿರುವ ಹೃಷಿಕೇಶ್ ಧರ್ಮಸ್ಥಳ ಅವರು ಬರೆದ ಬಾರದ ಸವಲತ್ತಿಗೆ ಕಾದಿದೆ ಜನತೆ ಎಂಬ ವರದಿ ೨೦೦೮ರ ಅಕ್ಟೋಬರ ೩ರಂದು ಪ್ರಕಟಗೊಂಡಿತ್ತು.

ಗ್ರಾಮೀಣ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಅಥವಾ ಅಲ್ಲಿನ ಧನಾತ್ಮಕ ಬೆಳವಣಿಗೆಗಳ ಬಗ್ಗೆ ಮಾಡಲಾದ ಅತ್ಯುತ್ತಮ ವರದಿಯನ್ನು ಪ.ಗೋ ಪ್ರಶಸ್ತಿಗೆ ಆರಿಸಲಾಗುತ್ತಿದೆ. ೧೯೯೯ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಹಿರಿಯ ಪತ್ರಕರ್ತ ಯು.ನರಸಿಂಹರಾವ್ ಅವರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಸಚಿವ ಕೃಷ್ಣ ಪಾಲೆಮಾರ‍್ ಮಾತನಾಡಿ, ಹಿಂದಿನ ಪತ್ರಕರ್ತರಂತೆ ಇಂದಿನ ಯುವ ಪತ್ರಕರ್ತರೂ ನಿಷ್ಠುರವಾಗಿದ್ದು ಗ್ರಾಮೀಣ ಸಮಸ್ಯೆಗಳನ್ನು ಬೆಳಕಿಗೆ ತರಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಗಳಲ್ಲಿ ಆಗುವಂತಹ ಸಮಸ್ಯೆಗಳನ್ನು ವರದಿಗಾರರು ಗಮನಕ್ಕೆ ತಂದಾಗ ಸರ್ಕಾರಕ್ಕೂ ತಿಳಿಯುತ್ತದೆ, ಆ ಮೂಲಕ ಅವುಗಳನ್ನು ಬಗೆಹರಿಸಬಹುದು ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್‌.ಟಿ ಬಾಳೆಪುಣಿ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಹರೀಶ್ ರೈ, ಸಂಘದ ಖಜಾಂಚಿ ಯೋಗೀಶ ಹೊಳ್ಳ ಪಾಲ್ಗೊಂಡರು. ಪ.ಗೋ ಕುಟುಂಬದವರು, ನರಸಿಂಹರಾವ್ ಕುಟುಂಬಸ್ಥರೂ ಕಾರ್ಯಕ್ರಮದಲ್ಲಿ ಹಾಜರಿದ್ದರು

Monday, August 17, 2009

ಹೆಗ್ಗಡೆಯವರೊಂದಿಗೆ ಸಂವಾದ


ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆ.೧೯ರಂದು ಸಂಜೆ ೪ ಗಂಟೆಗೆ ಸಂವಾದ ಏರ್ಪಡಿಸಲಾಗಿದೆ.

ಗ್ರಾಮೀಣಾಭಿವೃದ್ಧಿಯಲ್ಲಿ ತಮ್ಮ ಅನುಭವ, ಗ್ರಾಮೀಣಾಭಿವೃದ್ಧಿ ಯೋಜನೆ ಕುರಿತ ಕೆಲ ವಿಚಾರಗಳನ್ನು ಹೆಗ್ಗಡೆ ಅವರು ಸಂವಾದದಲ್ಲಿ ತೆರೆದಿಡಲಿದ್ದಾರೆ.
ಮಾಧ್ಯಮ ಮಿತ್ರರು ಎಂದಿನಂತೆ ಸಹಕರಿಸಬೇಕಾಗಿ ವಿನಂತಿ.

ಪ.ಗೋ ಪ್ರಶಸ್ತಿ ಮೊತ್ತದಲ್ಲಿ ಏರಿಕೆ

ಬಾರಿಯಿಂದ ಪ.ಗೋ ಪ್ರಶಸ್ತಿಗೆ ನೀಡುವ ಪ್ರಶಸ್ತಿ ಮೊತ್ತದಲ್ಲಿ ಏರಿಕೆಯಾಗಿದೆ.
೨೦೦೪ರಿಂದಲೇ ಪ್ರಶಸ್ತಿ ಮೊತ್ತವನ್ನು ಪ್ರಾಯೋಜಿಸುವ ಮೂಲಕ ಪ.ಗೋ ಟ್ರಸ್ಟ್‌ಗೆ ನೆರವಾಗುತ್ತಿದ್ದವರು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು.

ಈ ಬಾರಿ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವಂತೆ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಶ್ರೀ ಹೆಗ್ಗಡೆಯವರ ಕಚೇರಿಗೆ ತೆರಳಿ ಮನವಿ ಮಾಡಿಕೊಂಡರು. ಪ್ರಶಸ್ತಿ ಮೊತ್ತ ಕಡಮೆಯಾಗಿದ್ದು, ಅದನ್ನು ಏರಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟ ಹೆಗ್ಗಡೆಯವರು ಪ್ರಶಸ್ತಿ ಮೊತ್ತವನ್ನು ೫೦೦೧ ರು.ಗೆ ಏರಿಸಲು ಒಪ್ಪಿಕೊಂಡರು. ಅವರ ಮಾರ್ಗದರ್ಶನಕ್ಕೆ ಪತ್ರಕರ್ತರ ಸಂಘ ಆಭಾರಿ. ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಬಾಳೆಪುಣಿ, ಖಜಾಂಚಿ ಯೋಗೀಶ್ ಹೊಳ್ಳ, ಮಂಗಳೂರು ಪ್ರೆಸ್‌ ಕ್ಲಬ್‌ ಜತೆ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಇಂದಾಜೆ ನಿಯೋಗದಲ್ಲಿದ್ದರು.

ಹೃಷಿಕೇಶ್‌ಗೆ ಪ.ಗೋ ಪ್ರಶಸ್ತಿ

ದಿವಂಗತರಾಗಿರುವ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ನೆನಪಿನಲ್ಲಿ ಅತ್ಯುತ್ತಮ ಗ್ರಾಮೀಣವರದಿಗಾರಿಕೆ ಪ್ರಶಸ್ತಿಗೆ ಈ ಬಾರಿ ಕನ್ನಡಪ್ರಭ ಪತ್ರಿಕೆಯ ಧರ್ಮಸ್ಥಳ-ಉಜಿರೆ ಸುದ್ದಿಗಾರ ಹೃಷಿಕೇಶ್ ಧರ್ಮಸ್ಥಳ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭದಲ್ಲಿ ಅಕ್ಟೋಬರ‍್ ೩, ೨೦೦೮ರಲ್ಲಿ ಪ್ರಕಟಗೊಂಡ ಬಾರದ ಸವಲತ್ತಿಗೆ ಕಾದಿದೆ ಜನತೆ ಎಂಬ ವರದಿ ಪ್ರಶಸ್ತಿ ಗಳಿಸಿದೆ. ಇದು ೨೦೦೮ರ ಸಾಲಿನ ಪ್ರಶಸ್ತಿಯಾಗಿರುತ್ತದೆ.
ಗ್ರಾಮೀಣಮಟ್ಟದಲ್ಲಿ ಇರುವ ಅನೇಕ ಸಮಸ್ಯೆಗಳು, ಅಭಿವೃದ್ಧಿಗೆ ಗ್ರಾಮೀಣ ಭಾಗದಲ್ಲಿರುವ ಮಾದರಿಗಳು ಇತ್ಯಾದಿಗಳ ಬಗ್ಗೆ ಬರೆಯಲಾದ ಅತ್ಯುತ್ತಮ ವರದಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಶ್ರೀ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. ೧೯೨೮ - ೧೯೯೭ ) - ಹುಟ್ಟೂರು ಗಡಿಯಂಚಿನಲ್ಲಿರುವ ಅಡ್ಯನಡ್ಕ. ೧೯೫೬ ರಿಂದ ೧೯೯೭ನೇ ಇಸವಿಯವರೆಗೆ ನಾಲ್ಕು ದಶಕಗಳಷ್ಟು ಧೀರ್ಘ ಕಾಲಾವಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಉಪಸಂಪಾದಕ, ವರದಿಗಾರರಾಗಿದ್ದ ಪ.ಗೋ.ರವರು ೧೯೬೩ರಿಂದ ಸುಮಾರು ಎರಡು ವರ್ಷಗಳ ಕಾಲ ಮಂಗಳೂರಿನಿಂದ ತಮ್ಮ ಸ್ವಂತ ಕನ್ನಡ ದಿನ ಪತ್ರಿಕೆ "ವಾರ್ತಾಲೋಕ"ದ ವರದಿಗಾರ, ಮುದ್ರಕ ಮತ್ತು ಪ್ರಕಾಶಕರಾಗಿ ನಡೆಸಿ ಪತ್ರಿಕೋದ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದವರು. ಜೊತೆಗೆ ೧೩ ಪತ್ರಿಕೆಗಳಿಗೆ ಆಗಾಗ ಅಂಕಣ ಬರೆಯುತ್ತಿದ್ದವರು.
ಪ.ಗೋ ಸ್ಮಾರಕಾರ್ಥವಾಗಿ ಟ್ರಸ್ಟಿನ ವತಿಯಿಂದ ೧೯೯೯ರಲ್ಲಿ ಪ್ರಾರಂಭಿಸಿದ ಉತ್ಕೃಷ್ಟ ಗ್ರಾಮೀಣ ವರದಿಗೆ ನೀಡುವ ಪ.ಗೋ. ಸಂಸ್ಮರಣ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಈಗ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುನ್ನಡೆಸುವ ನಿರ್ಣಯವನ್ನು ಹಮ್ಮಿಕೊಂಡಿದೆ. ಈ ವರ್ಷ ಮೊದಲ ಬಾರಿಗೆ ಪತ್ರಕರ್ತರ ಸಂಘ ಪ್ರಶಸ್ತಿ ನೀಡುತ್ತಿದೆ.

Thursday, July 16, 2009

ದರಗಳು ಬದಲಾಗಿವೆ....

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಇನ್ನು ಕೊಂಚ ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ.
ಈಗಾಗಲೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ(ಜು.1ರಿಂದ). ಅದರಂತೆ ಇನ್ನು ಎಲ್ಲ ಪತ್ರಿಕಾಗೋಷ್ಠಿಗೂ 1000 ರು. ಶುಲ್ಕ.
ಪತ್ರಿಕಾಪ್ರಕಟಣೆಗಳಿಗೆ 100 ರು. ನೀಡಬೇಕಾಗುತ್ತದೆ.
ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ನಿಭಾಯಿಸಲು ಈ ಕ್ರಮ ಎಂದು ಪ್ರೆಸ್ ಕ್ಲಬ್ ಸಮಿತಿ ತಿಳಿಸಿದೆ. ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಅಪೇಕ್ಷಿಸುತ್ತೇವೆ.

Friday, July 3, 2009

ಪತ್ರಿಕಾಗೋಷ್ಠಿ ನಡೆಸೋದು ಹೇಗೆ ???


-ನಮ್ಮ ಸಮಸ್ಯೆಯೊಂದಿದೆ, ಅದನ್ನ ಹೇಳೋಕೆ ಪ್ರೆಸ್‌ಮೀಟ್ ಕರೆಯಬೇಕು...ಎಲ್ಲಿ ಮಾಡೋದು?
-ನಾವು ಹೊಸ product ತಂದಿದ್ದೇವೆ...ಅದರ ಬಗ್ಗೆ ಹೇಳಲು ಸುದ್ದಿಗೋಷ್ಠಿ ಮಾಡ್ಬೇಕು, ಹೇಗೆ ಮಾಡೋದು?
-ಪ್ರೆಸ್ ಮೀಟ್ ಮಾಡಬೇಕು ಎಂದಿದೆ, ಆದ್ರೆ ಎಷ್ಟು ಖರ್ಚಾಗುತ್ತೋ ಗೊತ್ತಿಲ್ಲ....

ಅನೇಕ ಮಂದಿಯನ್ನು ಕಾಡುವ ಪ್ರಶ್ನೆಗಳಿವು...

ಮಂಗಳೂರಿನಲ್ಲಿ ಸರಾಸರಿ ವಾರವೊಂದಕ್ಕೆ ೩೫-೪೦ ಪತ್ರಿಕಾಗೋಷ್ಠಿಗಳು ನಡೆಯುತ್ತವೆ...ಆದರೆ ಶೇ.೩೦ರಿಂದ ೪೦ರಷ್ಟು ಪಾರ್ಟಿಗಳಿಗೆ ಹೇಗೆ ಪತ್ರಿಕಾಗೋಷ್ಟಿ ನಡೆಸಬೇಕೆಂದು ಗೊತ್ತಿರುವುದಿಲ್ಲ. ಅಂತವರಿಗೆ ಈ ಚಿಕ್ಕ ಲೇಖನ ನೆರವಾದೀತು ಎಂಬ ಉದ್ದೇಶ ನಮ್ಮದು...

  • ಪತ್ರಿಕಾಗೋಷ್ಠಿ ನಡೆಸಲು ನಿರ್ದಿಷ್ಟ ಕಾರಣವಿರಲಿ. ಇಲ್ಲವಾದರೆ ನಿಮ್ಮ ಸಮಯ, ಪತ್ರಕರ್ತರ ಸಮಯ ಎರಡೂ ವ್ಯರ್ಥ. ವಿಷಯವಿಲ್ಲದೇ ಕೇವಲ ಪ್ರಚಾರಕ್ಕೋಸ್ಕರ ಪತ್ರಿಕಾಗೋಷ್ಠಿಯಿಂದ ಲಾಭಕ್ಕಿಂತ ನಷ್ಟ ಹೆಚ್ಚು.

  • ಪ್ರಮುಖ ಸಮಸ್ಯೆಗಳು ಕಾಡುತ್ತಿದ್ದು ಅದನ್ನು ಬೆಳಕಿಗೆ ತರುವುದಾದರೆ ಪತ್ರಿಕಾಗೋಷ್ಠಿ ನಡೆಸಬಹುದು. ಆದರೆ ಪತ್ರಿಕಾಗೋಷ್ಠಿ ನಡೆಸುವಾಗ ಆದಷ್ಟು ಕೂಲಂಕಷ ಮಾಹಿತಿ ನಿಮ್ಮಲ್ಲಿ ಇರಬೇಕು, ಯಾಕೆಂದರೆ ಪತ್ರಕರ್ತರಿಂದ ಪ್ರಶ್ನೆಗಳು ಬಂದೇ ಬರುತ್ತವೆ. ಅವುಗಳಿಗೆ ಸಮರ್ಪಕ ಉತ್ತರ ನೀಡಿ.

  • ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಪತ್ರಿಕಾಗೋಷ್ಠಿ ಕರೆಯಬಹುದು. ಅಂತಹ ಸಂದರ್ಭದಲ್ಲಿ ಉತ್ಪನ್ನದ ಬಗ್ಗೆ ಪೂರ್ಣ ಮಾಹಿತಿ ನೀಡಿ. ಮಾಧ್ಯಮದವರು ಅವರಿಗೆ ಬೇಕಾದಷ್ಟನ್ನು ಬಳಸಿಕೊಳ್ಳುತ್ತಾರೆ.

  • ರಾಜಕೀಯ ವ್ಯಕ್ತಿಗಳ ಪತ್ರಿಕಾಗೋಷ್ಠಿ. ಬಹುಷಃ ಪತ್ರಿಕಾಗೋಷ್ಠಿಗಳು ಆರಂಭವಾಗಿದ್ದೇ ರಾಜಕೀಯ ವರದಿಗಾರಿಕೆಯೊಂದಿಗೆ ಇರಬಹುದೇನೋ! ಸಾಮಾನ್ಯವಾಗಿ ಕೆಲವು ಹಿರಿಯ ನಾಯಕರಿಗೆ ಪತ್ರಿಕಾಗೋಷ್ಠಿ ಹೇಗೆ ಮಾಡಬೇಕು ಎಂದು ತಿಳಿಸಬೇಕಾಗಿಲ್ಲ. ಆದರೆ ಬಹುತೇಕ ‘ಯುವ’ ನಾಯಕರಿಗೆ ಮಾತ್ರ ಇದರ ಬಗ್ಗೆ ಅರಿವಿಲ್ಲ. ಚಿಕ್ಕ ಪುಟ್ಟ ವಿಷಯಗಳಿಗೆ(ಒಂದು ಹೇಳಿಕೆ ನೀಡಬೇಕಾದರೆ ಅದನ್ನ ಪತ್ರಿಕಾಲಯಗಳಿಗೆ ತಲಪಿಸಿದರೆ ಸಾಲದೇ?) ಪತ್ರಿಕಾಗೋಷ್ಠಿ ಕರೆಯುವುದು ಸಮಯ ವ್ಯರ್ಥವಾಗಿಸುವ ಚಟುವಟಿಕೆಯಷ್ಟೇ.

  • ಕೇವಲ ಆಮಂತ್ರಣ ಪತ್ರಿಕೆ ವಿತರಿಸುವ ಪತ್ರಿಕಾಗೋಷ್ಠಿಗಳೇ ಇಂದು ಹೆಚ್ಚುತ್ತಿವೆ. ಕಾರ್ಯಕ್ರಮ ನಿಜಕ್ಕೂ ಮಹತ್ವದ್ದಾದರೆ ಪತ್ರಿಕಾಗೋಷ್ಠಿ ನಡೆಸಬಹುದು. ಆದರೆ ಊರಿನ ಮೂಲೆಯ ಕ್ಲಬ್ಬೊಂದರ ವಾರ್ಷಿಕ ಸಭೆ ನಡೆಸುತ್ತೇವೆ, ಪೂಜೆ, ನಾಟಕ ನಡೆಸುತ್ತೇವೆ ಎನ್ನುವುದಕ್ಕೆ ಆಮಂತ್ರಣ ಪತ್ರಿಕೆ ಕೊಟ್ಟರೆ ಸಾಕು ಪ್ರೆಸ್ ಮೀಟ್ ಬೇಕಿಲ್ಲ.

  • ಎಲ್ಲ ಮಾಧ್ಯಮ ಪ್ರತಿನಿಧಿಗಳೂ ಒಂದೇ ರೀತಿ ಇರಬೇಕಿಲ್ಲ, ಯಾವುದೋ ನಿಮಗೆ ಇಷ್ಟವಾಗದ ಪ್ರಶ್ನೆ ಎದುರಾದರೆ ಅದನ್ನು ಜಾಣ್ಮೆಯಿಂದ ಉತ್ತರಿಸಬಹುದು, ಅದರ ಬದಲು ಎಗರಾಡಿದರೆ ವಾತಾವರಣ ಹಾಳಾಗುತ್ತದೆ ಅಷ್ಟೇ(ಉದಾಹರಣೆ: ಕಾಲೇಜಿನವರು ಪತ್ರಿಕಾಗೋಷ್ಠಿ ನಡೆಸುವಾಗ ಫೀಸ್ ಎಷ್ಟು ಎಂದು ಪ್ರಶ್ನೆ ಎದುರಾದರೆ ಅದನ್ನು ನಿಮಗೆ ಹೇಳಬೇಕಿಲ್ಲ, ಬೇಕಾದರೆ ಚೇಂಬರಿಗೆ ಬನ್ನಿ ಹೇಳುತ್ತೇವೆ ಎಂಬಂತಹ ಉತ್ತರ ಪತ್ರಿಕಾಗೋಷ್ಠಿಯ ದಿಕ್ಕು ತಪ್ಪಿಸುತ್ತವೆ).

  • ಪತ್ರಿಕಾಗೋಷ್ಟಿ ನಡೆಸುವಾಗ ಆದಷ್ಟೂ ಲಿಖಿತ ಮಾಹಿತಿ ನೀಡಿ.(press release, broucher, ಕರಪತ್ರ ಇತ್ಯಾದಿ). ಕೋರ್ಟು ಕಚೇರಿ ಸಂಬಂಧೀ ಸಮಸ್ಯೆಗಳಾಗಿದ್ದರೆ, ಯಾವುದೋ ವ್ಯಕ್ತಿ ಮೇಲೆ ಆರೋಪಗಳಿದ್ದರೆ ಸೂಕ್ತ ದಾಖಲೆಗಳಿರಲಿ.

  • ಅಗತ್ಯ ಇದ್ದವರಷ್ಟೇ ವೇದಿಕೆಯಲ್ಲಿದ್ದರೆ ಚೆನ್ನ. ಅತೀ ಅಗತ್ಯವಿದ್ದಲ್ಲಿ ಮಾತ್ರವೇ ಹೇಳಿಕೆಯನ್ನು ಓದಿ. ಇಲ್ಲವಾದರೆ ನೇರವಾಗಿ ವಿಷಯಕ್ಕೆ ಬಂದು ಸಂಕ್ಷಿಪ್ತ ವಿವರಣೆ ನೀಡಿ. ಫಾರ್ಮಲ್ ಆಗಿ ಪ್ರಾರ್ಥನೆ, ಸ್ವಾಗತ, ವಂದನಾರ್ಪಣೆ ಪತ್ರಿಕಾಗೋಷ್ಠಿಗೆ ಅನಗತ್ಯ.
  • ಅಧಿಕಾರಿಗಳು ಯಾವುದೋ ಹೊಸ ಯೋಜನೆ ಘೋಷಿಸಲು ಪತ್ರಿಕಾಗೋಷ್ಠಿ ಕರೆಯಬಹುದು.

ಕೊನೆಯಲ್ಲೊಂದು ಕಿವಿಮಾತು: ನಿಮ್ಮಲ್ಲಿ ಸುದ್ದಿಯಾಗಬಲ್ಲ ಮಾಹಿತಿ ಇದ್ದರೆ ಅದನ್ನು ಹುಡುಕಿ ಸುದ್ದಿಗಾರರೇ ಬರುತ್ತಾರೆ, ಸುಳಿವು ಕೊಟ್ಟರೂ ಸಾಕು!

Thursday, July 2, 2009

ಪ್ರದರ್ಶನದ ಕೆಲ ಸ್ಯಾಂಪಲ್ಸ್ !!!

ದ.ಕ. ಪತ್ರಿಕಾ ಛಾಯಾಗ್ರಾಹಕರು ಸೆರೆ ಹಿಡಿದ ಕೆಲ ಚಿತ್ರಗಳಿವು

ಚಿತ್ರಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ

ಮಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಏರ್ಪಡಿಸಲಾಗಿರುವ ಪತ್ರಿಕಾ ಛಾಯಾಗ್ರಾಹಕರ ಫೋಟೋ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅವರು ಗುರುವಾರ ಮಂಗಳೂರು ಪ್ರೆಸ್ ಕ್ಲಬ್ಬಿಗೆ ಭೇಟಿ ನೀಡಿ ಛಾಯಾಚಿತ್ರಪ್ರದರ್ಶನ ವೀಕ್ಷಿಸಿದರು. ಛಾಯಾಚಿತ್ರಕರ್ತರ ತಂಡದ ಉತ್ಸಾಹ ಮತ್ತು ಛಾಯಾಚಿತ್ರಗಳ ಗುಣಮಟ್ಟದ ಬಗ್ಗೆ ಪಾಲೆಮಾರ್ ಈ ಸಂದರ್ಭದಲ್ಲಿ ಶ್ಲಾಘಿಸಿದರು. ಚಿತ್ರಕರ್ತರು ತಮ್ಮ ಮೂರನೇ ಕಣ್ಣು ತೆರೆದಂತಾಗಿದೆ, ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ಜನರ ಮುಂದೆ ತೆರೆದಿಟ್ಟ ರೀತಿ ಶ್ಲಾಘನೀಯ ಎಂದರು.